Monday, March 26, 2007

ಸೆಲ್ ಫೋನ್ ಪುರಾಣ (cell-phone purANa)

ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಸೆಲ್-ಫೋನ್ ಕಾಟ ಜಾಸ್ತಿಯಗಿದೆ. ಈ ತಂತ್ರಜ್ಞಾನ ದೂರಸಂಪರ್ಕ ಕ್ರಾಂತಿಯನ್ನುಂಟು ಮಾಡಿದೆ ಎಂಬುದರಲ್ಲಿ ಸಂಶಯವಿಲ್ಲ. ವ್ಯವಹಾರ, ಉದ್ಯಮದವರಿಗೆ ಹಣ, ಸಮಯವನ್ನು ಉಳಿಸುತ್ತದೆ. ಆದರೆ ನಮ್ ದೇಶದಲ್ಲಿ ಪ್ರತಿಶತ ೭೦ ರಷ್ಟು ಜನ ಇದನ್ನು misuse ಮಾಡುತ್ತೀವಿ ಅಂತ ನನ್ ಅನಿಸಿಕೆ.

ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲೊಂದು ನಾಟಕ. ಜನ ಆಸಕ್ತಿಯಿಂದ ನೋಡುತ್ತಿದ್ದಾರೆ. ಮಧ್ಯೆ ಒಬ್ಬ ಸೂಟು-ಬೂಟು ಹಾಕಿದ್ದ ಮನುಷ್ಯನ ಸೆಲ್-ಫೋನ್ ಜೋರಾಗಿ ರಿಂಗ್ ಆಯ್ತು (ರಿಂಗ್ ಫೋನ್ ಬಗೆಗೆ ಬೇರೆಯೇ ಹರಟೆ ಬರೀಬೇಕು!). ಆ ಮನುಷ್ಯ ಇಡೀ ಸಭೆಗೆ ಕೇಳುವಂತೆ 'ಹಲ್ಲೋ, ನಾನು ಇಲ್ಲಿದೀನಿ, ನಾಟಕ ನೋಡ್ತಾ ಇದೀನಿ' ಅಂತ ಘೋಷಣೆ ಮಾಡ್ಕೊಂಡು ಮಾತು ಶುರು ಮಾಡಿದ್ರು. ರಂಗದ ಮೇಲಿದ್ದ ಕಲಾವಿದರಿಗೆ ತೊಂದ್ರೆ ಆಗಿದ್ದಲ್ಲದೆ ಅವರ ಸಂಭಾಷಣೆಗಳು ಮರೆತುಹೋದವು.

ಇನ್ನು 'ರಂಗ ಶಂಕರ'ಕ್ಕೆ ಬರುವವರು ಮತ್ತಷ್ಟು sophesticated ಜನ! ಸೆಲ್-ಫೋನ್ ರಿಂಗ್ ಗಳು ಕಡಿಮೆ. ಆದ್ರೆ ಬುದ್ಧಿವಂತ ಮಹಾಶಯರುಗಳು SMS ಟೈಪ್ ಮಾಡ್ತಾ ಇರ್ತಾರೆ.. (ಬೆಕ್ಕು ಕಣ್ಣು ಮುಚ್ಕೊಂಡ್ ಹಾಲು ಕುಡ್ಯೋ ರೀತಿ) ಆ ಕತ್ತಲೆಯಲ್ಲಿ ಅವರ ಬಣ್ಣದ screen ಯಾರಿಗೂ ತೊಂದ್ರೆ ಕೊಡಲ್ಲ ಅನ್ನೋ ಭಾವನೆಯಲ್ಲಿ!

ಮೇಲಿನೆರಡು ಘಟನೆಗಳಲ್ಲಿ ಸಹಪ್ರೇಕ್ಷಕರ ಮೇಲೆ ಸಹಾನುಭೂತಿಯ ವಿಷಯ ಇರಲಿ, ಕಲಾವಿದರಿಗೆ ಮರ್ಯಾದೆ ಕೊಡ್ಬೇಕು ಅನ್ನೋ ಕನಿಷ್ಟ ಸೌಜನ್ಯವೂ ಇಲ್ಲ ನಮ್ಮಲ್ಲಿ. ರವೀಂದ್ರ ಕಲಾಕ್ಷೇತ್ರದ ಘಟನೆಯಲ್ಲಂತೂ ಕಪ್ಪಣ್ಣನವರು (ನಾಟಕ ಅಕಾಡೆಮಿ) ಸರಿಯಾಗಿ ಉಗಿದರು 'ನಿಮ್ಮಂತೋರಿಂದ ಸಂಸ್ಕೃತಿ ಹಾಳಗತ್ತೆ, ಬರಲೇಬೇಡಿ' ಅಂತ.

ಇನ್ನು professional ರಂಗದಲ್ಲಿ..ಆಫೀಸ್ ಮೀಟಿಂಗ್ ನಲ್ಲಿ ಕೂತಿರ್ತಾರೆ. ವಿಚಿತ್ರವಾಗಿ ಫೋನ್ ಹೊಡ್ಕಳತ್ತೆ. ಅಲ್ಲೆ ಕೂತು 'ಹೆಲ್ಲೊ' ಅಂತಾರೆ. ಅದು ಸಾಮಾನ್ಯವಾಗಿ marketing ಕರೆಯಾಗಿರುತ್ತದೆ. 'I am not interested' ಅಂತ ಹೇಳಿ disconnect ಮಾಡ್ತಾರೆ! ಮೀಟಿಂಗ್ ನಲ್ಲಿ ಕೂತಿದೀವಿ ಅನ್ನೊ ಪ್ರಜ್ಞೆನೇ ಇರಲ್ಲ.

ಇನ್ನು ಭಕ್ತಿ-ನೆಮ್ಮದಿಗಾಗಿ ಧರ್ಮಸ್ಥಳಕ್ಕೆ ಬರ್ತಾರೆ. ಗುಡಿಯ ಪ್ರಾಂಗಣಕ್ಕೆ ಬಂದ ಕೂಡಲೇ ಸೆಲ್-ಫೋನ್ ಆರಿಸಿ ಎಂದು ಬರೆದಿದ್ದಾರೆ. ಮಹಾಶಯರುಗಳು ಗರ್ಭಗುಡಿಯಲ್ಲಿ ದೇವರ ಮುಂದೆ ನಿಂತು ಫೋನ್-ನಲ್ಲಿ ಮಾತಾಡ್ತಾ ಇರ್ತಾರೆ! ನೂರಾರು ಮೈಲಿ ದೂರದಿಂದ ಬಂದು, ೧-೨ ಘಂಟೆ ಕಾಲ ಸರದಿಯಲ್ಲಿ ನಿಂತು, ಸಿಗೋ ೧೦ ಸೆಕೆಂಡ್ ಕಾಲದಲ್ಲಿ ಮಂಜುನಾಥನ ದರ್ಶನ ಮಾಡೋ ಪುಣ್ಯದ ಅವಕಾಶ ಕಳ್ಕೋಬಾರ್ದು ಅಂತಾನೂ ಹೊಳೆಯಲ್ಲ ತಲೆಗಳಿಗೆ! ಮನೇಲಿ ಜಪ, ಧ್ಯಾನ ಮಾಡುವಾಗ ಕೂಡ ಸೆಲ್-ಫೋನ್ ಕಡೆ ಒಂದು ಗಮನವಿರುತ್ತದೆ.

ನಮ್ಮಲ್ಲಿ maturity ಬರೋದು ಯಾವಾಗ? ನನ್ನ ಅಮೇರಿಕ ವಾಸದ ವರ್ಷಗಳಲ್ಲಿ (ಅದೂ ನಾನಿದ್ದ high-tech ಊರಿನಲ್ಲಿ) ಯಾವತ್ತೂ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ತೊಂದ್ರೆ ಆಗೋದು ನೋಡಿಲ್ಲ. ಕೆಲವೊಮ್ಮೆ ಆಫೀಸ್ ನಲ್ಲಿ ತೊಂದ್ರೆ ಆದ್ರೂ ಅದು ದೇಸಿ ಮಿತ್ರರಿಂದ!

ಈ ಸಮಸ್ಯೆಗೆ ನನ್ನ ಮೈಸೂರು ಸ್ನೇಹಿತ ಕಂಡುಕೊಂಡ ಪರಿಹಾರ ಅನುಕರಣೀಯ. ಅವನ ಉದ್ಯಮದಲ್ಲಿ ಯಾವ ಸಮಯದಲ್ಲಿ ಕೂಡ ವ್ಯವಹಾರದ ಕರೆಗಳು ಬರತ್ತೆ. ಆದರೂ ಮತ್ತೊಬ್ಬರೊಡನೆ ಮಾತಾಡುವಾಗ, ಸಂಜೆಯ ವಾಯು ವಿಹಾರದಲ್ಲಿದ್ದಾಗ, ಮಕ್ಕಳೊಡನೆ ಆಟವಾಡುವಾಗ ಫೋನ್ ಎತ್ತಲ್ಲ. ಅವನ ಹೆಂಡತಿ ಮತ್ತು ತಾಯಿಗೆ ಅವನು ಎಲ್ಲಿ ಹೋಗುತ್ತಾನೆಂದು ತಿಳಿದಿರುತ್ತದೆ. ಅವರುಗಳು ಸುಮ್ನೆ ಎಲ್ಲಿದೀಯಾ, ಎಷ್ಟೊತ್ತಿಗೆ ಬರ್ತೀಯಾ ಅಂತೆಲ್ಲ ತೊಂದ್ರೆ ಕೊಡಲ್ಲ.

ಜನ ಸೆಲ್-ಫೋನ್ ಉಪಯೋಗಿಸಲಿ, ಆದ್ರೆ ಬೇರೆಯವ್ರಿಗೆ ತೊಂದ್ರೆ ಆಗದ ಹಾಗೆ ಉಪಯೋಗಿಸಿದರೆ ಯಾರಿಗೂ ಬೇಜಾರಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಪಯೋಗಿಸುವಾಗ ಸ್ವಲ್ಪ ಬುದ್ಧಿಯೂ ಇಲ್ಲದೆ ಎಲ್ಲರಿಗೂ ಕಿರಿಕಿರಿಯಾಗುವಂತೆ ಮಾಡುವುದು fashion-ಒ ಅಥವಾ ಮೌಢ್ಯವೋ ಗೊತ್ತಿಲ್ಲ.
ಅಕಸ್ಮಾತ್ ತುರ್ತು ಕರೆಯಾದ್ರೂ, ನಾವೇನು ಹೋಗಿ ಯಾರ್ದಾದ್ರೂ ಪ್ರಾಣ ಉಳಿಸಕ್ಕಾಗತ್ತಾ? ಅದೂ ಬೆಂಗಳೂರಿನ ಟ್ರಾಫಿಕ್ಕನ್ನು ಗೆದ್ದು!?

ನಾವೆಲ್ಲ ವಿದ್ಯಾವಂತ ಅಸಂಸ್ಕೃತರಲ್ಲವೇ?