Sunday, March 18, 2007

ಆತ್ಮರತಿ (Atmarati)

ಕೆಲವು ತಿಂಗಳ ಹಿಂದೆ ರವಿ ಬೆಳಗೆರೆಯವರ ಒಂದು ಲೇಖನದಲ್ಲಿ ಸ್ವಾರಸ್ಯಕರ ಪದದ ಪರಿಚಯವಾಯ್ತು. ಅದು 'ಆತ್ಮರತಿ' - ಅರ್ಥ ಹೀಗಿದೆ

narcissism (ನಾ) (ಅತಿಯಾದ) ಆತ್ಮರತಿ, ಸ್ವಾರಾಧನಾ ಪ್ರವೃತ್ತಿ, ತನ್ನನ್ನು ತಾನೇ ಮೆಚ್ಚಿಕೊಳ್ಳುವುದು

ಸ್ವಲ್ಪಮಟ್ಟಿಗೆ ನಮ್ಮೆಲ್ಲರಲ್ಲೂ ಇದು ಇರುತ್ತೆ ಅಥವಾ ಸ್ವಲ್ಪ ಮಟ್ಟಿಗೆ ಇರಬೇಕು ಅನ್ಸತ್ತೆ. ಆದರೆ ಎಲ್ಲರ ಜೊತೆ ಮಾತಾಡುವಾಗ (ಗುಂಪಿನಲ್ಲಿರಲಿ/ಮುಖಾಮುಖಿ ಒಬ್ಬರ ಜೊತೆಯಾಗಲಿ) ಬರೀ ನಮ್ಮ ಪುರಾಣವನ್ನೇ ಹೇಳುವುದು, ನನ್ನಿಂದಲೇ ಎಲ್ಲ ಆಗುವುದು ಅನ್ನುವುದು, corporate ನಲ್ಲಿರುವ 'market yourself' ಎಂಬ ಅಲಿಖಿತ ನಿಯಮವನ್ನು ಭಕ್ತಿಯಿಂದ ಪಾಲಿಸಿವುದು , ಇವೆಲ್ಲ ಆತ್ಮರತಿಯ ಲಕ್ಷಣಗಳು.

ನನ್ನ ಮಟ್ಟಿಗೆ ಹೇಳಬೇಕಾದರೆ ತುಂಬ ಆಪ್ತರೊಡನೆ ಮಾತಾಡುವಾಗ ನಾನು ಪ್ರತಿಶತ ೭೦ರಷ್ಟು ನಾನೇ ಮಾತಾಡ್ತೀನಿ ಅಂತ ೩-೪ ವರ್ಷಗಳ ಹಿಂದೆ ನನ್ನ ಸ್ನೇಹಿತೆಯೊಬ್ಬಳು ನನಗೆ ಹೇಳಿದ್ದಳು. ಮಾತು ನನ್ನ ಬಗೆಗೆ ಆಗಿತ್ತು ಅಂತ ಏನಲ್ಲ, ಆದ್ರೂ ನನ್ನ ಮೇಲೆ ಪ್ರಭಾವ ಬೀರಿರುವ ವ್ಯಕ್ತಿ, ಕ್ರೀಡೆ, ಕಲೆ ಬಗ್ಗೆ ಸಿಕ್ಕಾಪಟ್ಟೆ ಮಾತಾಡ್ತೇನೆ ಅನ್ನೋದು ಅವಳಭಿಪ್ರಾಯ. ಇದು ನಿಜ ಅನ್ನಿಸಿತ್ತು. ಅದಕ್ಕಾಗಿ ಕೆಲವು ಮಿತ್ರರೊಡನೆ ಚರ್ಚಿಸಿ ನನ್ನನ್ನು observe ಮಾಡಲು ಹೇಳಿ, ಅವರ ಪ್ರತಿಕ್ರಿಯೆ ಕೇಳಿ ತಿದ್ದಿಕೊಳ್ತಾ ಇದೀನಿ. ಸ್ವಲ್ಪ ಮಟ್ಟಿನ ಸುಧಾರಣೆಯಾಗಿದೆ ಈಗ ಅನ್ಸತ್ತೆ. ಗುಂಪಿನಲ್ಲಿರುವಾಗ ನಾನು ಮಾತಾಡೋದ್ ಕಮ್ಮಿ. ನನ್ನನ್ನೇ ನಾನಂತೂ market ಮಾಡ್ಕೊಳಲ್ಲ, ಮೆಚ್ಚಿಕೊಳ್ಳುವುದಂತೂ ದೂರದ ಮಾತು! ಇದರ ಬಗ್ಗೆ 'ಅಂತಿಮ ತೀರ್ಮಾನ' ಇತ್ತೀಚೆಗೆ ಸಂಪರ್ಕದಲ್ಲಿರುವ ಸ್ನೇಹಿತರೇ ಹೇಳಬೇಕು ;)

ಆತ್ಮರತಿಯ ಪರಾಕಾಷ್ಠೆ ನೋಡಬೇಕಿದ್ರೆ ನೀವು ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾದ ಡಾ|| ಮಹೇಶ್ ಜೋಷಿ ಅವರನ್ನು ನೋಡಬೇಕು. ಅವರ ಬಗ್ಗೆ ನನಗೆ ಬಹಳ ಗೌರವವಿದೆ. ದೂರದರ್ಶನದಲ್ಲಿ ಕನ್ನಡ, ಕಲೆ, ಸಂಸ್ಕೃತಿಗೆ ಸಂಬಂಧಿಸಿದ
ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇವರು ಬಂದ ನಂತರ ಚಂದನ ವಾಹಿನಿ ನಂ.೧ ವಾಹಿನಿಯಾಗಿದೆ. ತುಂಬ innovative ಮನುಷ್ಯ. ಆದರೆ ಚಂದನದ ವಿಶೇಷ ಕಾರ್ಯಕ್ರಮಗಳನ್ನು ನೀವು ನೋಡಿದ್ದರೆ ತಿಳಿಯುತ್ತೆ, ೨ ಘಂಟೆ ಕಾರ್ಯಕ್ರಮದಲ್ಲಿ ಸರಾಸರಿ ೧೫೦- ೨೦೦ ಬಾರಿ ಅವರ ಮುಖದರ್ಶನವಾಗುತ್ತೆ (ಇದು ಅವರ ಖಾಸಗಿ ವಾಹಿನಿ ಎಂಬಂತೆ!). ಇವತ್ತಿನ ಯುಗಾದಿ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ಹಾಸ್ಯದ ನಡುವೆ ಅವರ ಹಾವಭಾವಗಳ ದರ್ಶನ ಮಾಡಿಸದಿದ್ರೆ ತಮ್ಮ ಕೆಲಸ ಕಳ್ಕೋತೀವಿ ಅನ್ನೋ ಹಾಗೆ production unit ವರ್ತಿಸಿದ್ರು. ಇದು ಎಲ್ಲ ಕಾರ್ಯಕ್ರಮಗಳಲ್ಲೂ ಮಾಮೂಲು. ಚಂದನದ ಸಂಜೆ ೭:೦೦ ರ ವಾರ್ತೆಯಲ್ಲಿ ಜೋಷಿಯವರು ಹೋಗಿದ್ದ ಪುಸ್ತಕ ಬಿಡುಗಡೆ, ರಂಗ ಪ್ರವೇಶ, ನಾಟಕ, ಶಾಲಾ ಕಾರ್ಯಕ್ರಮಗಳ ನ್ಯೂಸ್ ಐಟಮ್ ಇದ್ದೇ ಇರತ್ತೆ!

ಗೊತ್ತೋ ಗೊತ್ತಿಲ್ಲದೆಯೋ ನಮ್ಮಲ್ಲೂ ಇದು ಇರತ್ತೆ. ಇದು ಇರಬೇಕೇ? ಇರಬೇಕೆಂದರೆ ಎಷ್ಟಿರಬೇಕು?

ಪತ್ರಕರ್ತ ವಿಶ್ವೇಶ್ವರ ಭಟ್ಟರು ಪತ್ರಿಕೋದ್ಯಮದ ದಿಗ್ಗಜ ರಾಮನಾಥ ಗೋಯಂಕಾ ಬಗ್ಗೆ ಹೇಳಿದ್ದು.. Indian Express ಕಟ್ಟಿ ಬೆಳೆಸಿದ ಗೋಯಂಕಾರ ಭಾವಚಿತ್ರ ಅವರ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಕೇವಲ ಒಮ್ಮೆ ಮಾತ್ರ, ಅವರು ವಿಧಿವಶರಾದಾಗ!



1 comment:

Anusha Vikas said...

ravi belagere's books are always a laugh. or they are so interesting you won't feel like leaving it!


As for your article, I think you've made it rather interesting yourself!
--------------------------------------------------------
If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...