Friday, March 16, 2007

ಮಿಡಿಯುತಿರಲಿ ಮೌನವೀಣೆ (miDiyutirali maunavINe)

ಡಿಸೆಂಬರ್ ಕಡೆಯ ವಾರದಿಂದ ಸ್ನೇಹಿತರಿಂದ 'ಮುಂಗಾರು ಮಳೆ'ಯ ಬಗ್ಗೆ ಸಿಕ್ಕಾಪಟ್ಟೆ ಉತ್ತಮ ಪ್ರತಿಕ್ರಿಯೆ ಬರಲು ಶುರು ಆಯ್ತು. ಕೆಲವರಂತೂ 'ಈ ಸಿನೆಮಾ ನೋಡದಿದ್ರೆ ನಿನ್ನ ಕನ್ನಡಾಭಿಮಾನವನ್ನೇ ಪ್ರಶ್ನಿಸಬೇಕಾಗುತ್ತೆ!' ಅಂತ ಬೆದರಿಕೆ ಹಾಕಿದ್ರು. ಇತ್ತೀಚೆಗಂತೂ ಕನ್ನಡ ಸಿನೆಮಾ ನೋಡೋ ಅಭ್ಯಾಸವೇ ಇಲ್ಲ (ಇಂಗ್ಲಿಷ್ ಬಿಟ್ರೆ ಬೇರೆ ಯಾವುದೇ ಭಾಷೆ ಸಿನೆಮಾ ನೋಡಲ್ಲ..).

ಇದರ ಜೊತೆಗೆ ನನ್ನ ಮೆಚ್ಚಿನ ಅಂಕಣಕಾರ ಪ್ರತಾಪ್ ಸಿಂಹ ಇದರ ಬಗ್ಗೆ ಬರೆದ ಮೇಲಂತೂ ಈ ಸಿನೆಮಾ ಬಗೆಗಿನ ಕುತೂಹಲ ಜಾಸ್ತಿ ಆಯ್ತು. ಹಾಡುಗಳನ್ನು ಇಂಟರ್ ನೆಟ್ ಮೂಲಕ ಕೇಳಿದೆ. ಅಷ್ಟು ಇಷ್ಟ ಆಗಲಿಲ್ಲ. ಆದರೂ ಆಫೀಸ್ ಕನ್ನಡಿಗ ಈ-ಮೈಲ್ ಲಿಸ್ಟ್ ನಲ್ಲಿ ಹಾಡುಗಳ ಸಾಹಿತ್ಯ, ಚಿತ್ರದ ಸಂಭಾಷಣೆಗಳ ಕಾಟ ಜಾಸ್ತಿ ಆಗ್ತಾನೇ ಇತ್ತು!

ಕಡೆಗೂ ನಿನ್ನೆ ಪಿವಿಆರ್ ನಲ್ಲಿ ಈ ಸಿನೆಮಾಕ್ಕೆ ಹೋದೆ. ಮೊದಲ ಭಾಗ ನೋಡಿದಾಗ ಚಿತ್ರ ಕೆಟ್ಟದಾಗಿಲ್ಲದಿದ್ರೂ ಇದೇನೂ ಬೇರೆ ಚಿತ್ರಗಳಿಗಿಂತ ಬೇರೆ ಅಲ್ಲ ಅನ್ನಿಸ್ತು. ಜೊತೆಗೆ ಮಿತ್ರ ಅವಿನಾಶ್ ಮೇಲೆ ಕೋಪನೂ ಬಂತು! ಇವರಂತೂ ಈ ಸಿನೆಮಾ ಬಗ್ಗೆ ಎಷ್ಟು ತರಹ ಹೊಗಳಿದ್ದರು ಎಂದರೆ, ನಿರ್ಮಾಪಕರು ಬೇರೆ ಜಾಹಿರಾತು ಕೊಡೋ ಬದ್ಲು ಇವರಿಗೆ ದುಡ್ಡು ಕೊಟ್ಟು ಎಲ್ಲ ಕಡೆ ಮಾತಾಡಿ ಅನ್ಬೇಕಿತ್ತು!

ದುಡ್ಡು ತೆತ್ತ ತಪ್ಪಿಗೆ ನೋಡೋಣ ಅಂತ ವಿರಾಮದ ನಂತರ ಕೂತೆ. ಸಿನೆಮಾದ track ಬದಲಾಗ್ ಹೋಯಿತು.. ಕತೆ ಹೊಸದಲ್ಲದಿದ್ರೂ ಸಂಭಾಷಣೆ, ಹಾಡುಗಳು, ಸಂಗೀತ ಎಲ್ಲ ಅದ್ಭುತವಾಗಿವೆ ಅನ್ಸೋಕ್ ಶುರು ಆಯ್ತು. 'ಕಾಮೆಡಿ ಟೈಮ್' ಗಣೇಶ್ ಅಭಿನಯವಂತೂ ತುಂಬ ಸಹಜ ಎನ್ನುವಷ್ಟರ ಮಟ್ಟಿಗೆ ಇದೆ. ಬೇರೆ ನಮ್ ನಾಯಕನಟರನ್ನು ಹಾಕ್ಕೊಂಡಿದ್ರೆ ಅತ್ತು, ನಮಗೂ ಅಳು ಬರಿಸಿ, ಪೂರ್ತಿ sentimental ಆಗಿ dialogue ಹೊಡೆಯೋಕ್ ಹಚ್ಚ್ಕೊಂಡ್ ಇರೋರು! ನಿರ್ದೇಶನ ಸಹ ಅಷ್ಟೆ, ಸಕತ್ ಬಿಗಿಯಾಗಿದೆ. ಸುಮ್ ಸುಮ್ನೆ ಕೆಟ್ದಾಗಿ ಹಾಡ್ ಸೇರ್ಸೋದು, ಪ್ರೇಮಿಯ ತೊಳಲಾಟವನ್ನು ಬೇರೆಯವರ ಜೊತೆ (ಸಿನೆಮಾದ) ಅರ್ಧಘಂಟೆ ಕುಯ್ಯೋದು, 'ತ್ಯಾಗ',ಸತ್ ಹೋಗ್ತೀನಿ ಅಂತ senti ಹೊಡೆಯೋದು ಏನೂ ಇಲ್ಲಿಲ್ಲ.. ಆದ್ರೂ ಇವೆಲ್ಲ ಇದೆ, ಮತ್ತು ಬೇಗ move ಆಗತ್ತೆ! ನಾಯಕ ತನ್ನ ಸಮಸ್ಯೆಯನ್ನು ಒಂದು ಬಾರಿ ಅಮ್ಮನ ಜೊತೆ ಹಂಚಿಕೊಳ್ಳೋದ್ ಬಿಟ್ರೆ, ಸುಮ್ನೆ ಅವನಿಗನ್ನಿಸಿದ್ ಹಾಗೆ ಮಾಡ್ತಾನೆ ಮತ್ತು ತುಂಬಾ practical ಆಗ್ತಾನೆ. ಕಡೆಯ ಬಾರಿ ನಾಯಕಿಯನ್ನುಭೇಟಿ ಮಾಡಿದಾಗಲೂ ಅಷ್ಟೆ, non-sense ಸಂಭಾಷಣೆ ಇಲ್ಲ.

ಇಷ್ಟೆಲ್ಲ practical ಆಗಿದ್ರೂ, ಸಿನೆಮಾದಲ್ಲಿ, ಸಂತೋಷ, ದುಃಖ, ವಿರಹ ವೇದನೆ ಎಲ್ಲ ಇದೆ, ಆದ್ರೆ ಯಾವ್ದೂ ಅತಿರೇಕಕ್ಕೆ ಹೋಗಿಲ್ಲ. ಅದಕ್ಕೆ ಇದು ಜನಕ್ಕೆ ಇಷ್ಟ ಆಗಿರೋದು. ಈ ರೀತಿ ಸಿನೆಮಾ ಭಾರತದ ಇನ್ಯಾವುದೇ ಭಾಷೆಯಲ್ಲಿ ಇರುವ, ನೋಡಿದ ಬಗ್ಗೆ ನಾನು ಕೇಳಿಲ್ಲ. ಆದ್ದರಿಂದ ಇದು ನಮ್ಮವರದೇ ಹೊಸ ಪ್ರಯೋಗ ಅಂತ ಅಂದ್ಕೊಂಡಿದೀನಿ.

ಹಾಡುಗಳ ಬಗ್ಗೆಯಂತೂ ನಾನ್ ಏನೂ ಹೇಳ್ಬೇಕಾಗಿಲ್ಲ. ಈಗಾಗ್ಲೆ ಎಲ್ಲರ player ನಲ್ಲಿ, ಎಫ್.ಎಮ್.ನಲ್ಲಿ ಮೂಡಿ ಬರುವ ಹಾಡೇ ಮುಂಗಾರು ಮಳೆಯದ್ದು. ಡಿಜಿಟಲ್ ಡಾಲ್ಬಿ ೭ ರಲ್ಲಿ ಹಾಡು ಕೇಳಿದ್ ಮೇಲೆ, ಸಾಹಿತ್ಯ ಕೂಡ ಇಷ್ಟ ಆಗಿದೆ!

ನಿರ್ಮಾಪಕ, ನಿರ್ದೇಶಕರು ಇಷ್ಟು risk ತೊಗೊಂಡು ಗಣೇಶ್ ಗೆ ನಾಯಕ-ನಟ ಕೊಟ್ಟಿರುವಾಗ, ಮೊದಲರ್ಧದ ಕೆಲವು ಭಾಗವನ್ನು ತೆಗೆದು 'ಇಂಗ್ಲಿಷ್' ಸಿನೆಮಾ ತರಹ ಮಧ್ಯಂತರ ವಿರಾಮ ಇಲ್ದೇ ಇರೋ ಕನ್ನಡ ಸಿನೆಮಾ ಕೊಟ್ಟಿದ್ರೆ ಚೆನ್ನಾಗಿರ್ತಿತ್ತು. ಗಾಯಕರ ವಿಷಯದಲ್ಲಂತೂ ಪಕ್ಕಾ ಮೋಸ. ಹೇಮಂತ್ ಗೆ 'ಅನಿಸುತಿದೆ ಯಾಕೋ', ರಾಜೇಶ್ ಗೆ 'ಮುಂಗಾರು ಮಳೆ' ಕೊಡ್ಬೇಕಿತ್ತು. star-power ಅನ್ನೋದ್ ಬಿಟ್ರೆ, ಉದಿತ್ ನಾರಾಯಣ್ ಗಾಯನದಲ್ಲಿ ಭಾವವಿಲ್ಲ. ಸೋನು ನಿಗಮ್ ಓಕೆ. ಶ್ರೇಯಾ ಘೋಷಾಲ್ ಚೆನ್ನಾಗಿ ಹಾಡಿದ್ದಾರೆ - ಆದ್ರೂ ನಂದಿತಾ, ಶಮಿತಾ, ಸುಪ್ರಿಯಾ ಯಾರೂ ನೆನಪಿಗೆ ಬರಲಿಲ್ವಾ?

ನನ್ rating 9/10.

--
ಬಾಡದಿರು ಸ್ನೇಹದ ಹೂವೆ, ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ..ಹೀಗೆ ಸುಮ್ಮನೆ
--

No comments: